ಶನಿವಾರ, ಜನವರಿ 26, 2013

ಹನಿಗವನಗಳು



ಅವಳ ನೆನಪು

ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು
ಮಮತೆಯಿಂದ ಸಲಹಿದಂತ ತಾಯಿ ಮಡಿಲನು
ತಿದ್ದಿ ತೀಡಿ ಬೆಳೆಸಿದಂತ ತಂದೆ ಮಾತನು
ಅನ್ನ ಅಕ್ಕ ತೋರಿದಂತ ಪ್ರೀತಿ ನೆನಪನು ೧
ನಮ್ಮ ನೆಲದ ಗಂಧ ಗಾಳಿ ಇಲ್ಲಿ ರುಚಿಸದು
ಇವರು ತೋರ್ವ ಮಮತೆ ಪ್ರೀತಿ ಕ್ಷಣಿಕವಾದುದು
ಅಲ್ಲಿ ಸಿಗುವ ಮಣ್ಣ ವಸುಧೆ ಇಲ್ಲಿ ಇಲ್ಲವೋ
ಇಲ್ಲಿ ಇರುವ ಮಣ್ಣಿನಲ್ಲಿ ಪ್ರಣಯ ಇಲ್ಲವೋ ೨
ನಮ್ಮ ಊರು ನಮ್ಮ ಜನ ಏನು ಚಂದವೋ
ಬಡವನೂಟ ಬಾಳಿನಲ್ಲಿ ಸಿರಿಯ ಭಾಗ್ಯವೋ
ಹರುಕ ಸೀರೆ ಮುರುಕ ಬಟ್ಟೆ ನಮ್ಮ ತಾಯಿಯೋ
ಆದರವಳು ನಮ್ಮ ಮನಸ ಪ್ರೇಮದಾಯಿಯೋ ೩
ಎಲ್ಲ ಇದೆ ಇಲ್ಲಿ ಎಂಬ ಪೊಳ್ಳು ಮನಸಿದೋ
ಹಣದ ಮುಂದೆ ಮನವು ಮಾನ ಮಾರಿಕೊಂಬುದೋ
ಅನುರಾಗದ ಸೆಲೆಗೆ ಇಲ್ಲಿ ಬೆಲೆಯೆ ಇಲ್ಲವೋ
ಇದ್ದರೂನು ತಾಯ್ಗೆ ಬಟ್ಟೆ ಹರುಕೆ ಚಂದವೋ ೪
ಏನೆ ಆದ್ರೂ ನಮ್ಮ ತಾಯ್ಗೆ ನಾವೆ ಮಕ್ಕಳು
ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು
ನಮ್ಮ ನೀರು ನಮ್ಮ ಗಾಳಿ ಗಂಧದ ಗುಡಿಯೋ
ಇರುವುದೆಲ್ಲ ಬಿಟ್ಟು ಇಲ್ಲಿ ಅಲ್ಲಿಗೆ ನಡಿಯೋ ೫
**************************************

ನಯನ

ದಿನವೂ ನಡೆದಿತ್ತು
ಅವರೀರ್ವರ
ನಯನಗಳ
ಮಿಲನ ||
ನಯನ
ನನ್ನವಳಾಗುವ
ದಿನ
ಬ೦ದೇ ಬರುವುದು
ಆ ಸುದಿನ
ಎ೦ದಿತು
ಅವನ ಮನ |
ಆದರೆ
ಅವಳಾಗಬೇಕೆ
ಬೇರೊಬ್ಬನಲ್ಲಿ
ವಿಲೀನ ?

******************************

ಕನಸು
ಮುಗ್ಧ ನಯನಗಳಲಿ ಕಲ್ಪನೆಯಾ ಸರಮಾಲೆ
ಹೃದಯ ಚಿತ್ತಾರದಲಿ ಬಣ್ಣದಾ ರಂಗೋಲೆ
ನಿದಿರೆಯ ಮಂಪರಲಿ ಹಂಬಲದಾ ಅಲೆ
ಬಯಕೆಗಳ ಭುವಿಗಿಳಿಸಲೆಂದು ದೇವರಿಗೆ ಕಳಿಸಿದಾ ಓಲೆ
ವಾಸ್ತವ
ಕನಸು ಕಲ್ಪನೆಗಳ ಮೀರಿದ
ಹಂಬಲ ಬೆಂಬಲಗಳ ದಾಟಿದ
ನೆನಪು ನಿರೀಕ್ಷೆಗಳ ಮೀಟಿದ
ಒಲವು ಚೆಲುವುಗಳ ಚಿವುಟಿದ
ಇಹದ ಪ್ರಜ್ನೆಯ ತೋರಿಹ ಜಗತ್ತು!
ಮುಗುಳ್ನಗೆ
ನೋಡಿದರದುವೆ ತೋರಿಹುದು ಆಹ್ವಾನ
ಹೃದಯದ ಪುಟದಿಂದ ಕಾಣುವ ಆಶ್ವಾಸನ
ಕ್ಷಣ ಕ್ಷಣಕೂ ಮಿಂಚಿ ಮರೆಯಾಗುತಿಹ ಭಾವನ
ಸುಂದರ ಮೊಗದಲಿದೊ ಮೋಹಕ ಕವನ!
ಹುಣ್ಣಿಮೆ
ಕಣ್ ಕೋರೈಸುವ ಬೆಳ್ಳಿಯ ಬೆಳಕು
ಹೊಳೆ ಹೊಳೆಯುತಿಹ ಚಿನ್ನದ ಥಳಕು
ಆಗಸದಿ ತಾರೆಗಳಿಗೋ ಸ್ವಾಗತದ ಸಂಭ್ರಮ
ಅದುವೆ ಈ ಸಂಧ್ಯೆಯಲಿ ಪೂರ್ಣ ಚಂದ್ರನ ಉಗಮ!
ಪ್ರೇಮ
ಎಂದೆಂದಿಗೂ ಮರೆಯಲಾರದ
ಯಾರಲ್ಲಿಯೂ ಅರುಹಲಾರದ
ಮನದಲ್ಲಿಯೇ ಅದುಮಿಡಲಾರದ
ಕೊನೆಗೆ ನಿನ್ನಲ್ಲಿ ತಿಳಿಸಿಯೂಬಿಡಲಾರದ
ಅವಿಸ್ಮರಣೀಯ ಅನುಭೂತಿಯೇ 'ಪ್ರೇಮ'.

ಕಾಮೆಂಟ್‌ಗಳಿಲ್ಲ: